ಸುಮಾರು 1200 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯಲ್ಲಿರುವ ಪುಣ್ಯಕ್ಷೇತ್ರ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನ . ನಾನು ಮತ್ತು ನಮ್ಮ ಶ್ರೀ ಕಾವೀ: ಕೃಪಾ ಸಂಕೇತ್ ಮಿತ್ರ ಮಂಡಳಿ ಆಡಿ ಬೆಳೆದದ್ದು ಈ ಕ್ಷೇತ್ರದ ಅಂಗಣದಲ್ಲಿಯೇ. ಇದುವರೆಗೆ ಯಾವುದೇ ಲಿಖಿತ ದಾಖಲೆಗಳಿಲ್ಲದ ಹಲವಾರು ವಿಚಾರಗಳನ್ನು ನಮ್ಮ ಊರಿನ ಹಿರಿಯನೇಕರ ಅನುಭವದ ವಿಚಾರಗಳನ್ನು ಸಂಗ್ರಹಿಸಿ ಈ ಲೇಖನವನ್ನು ಸಿದ್ಧಪಡಿಸಿದ್ದೇನೆ. ಇದು ಮೌಖಿಕವಾದ ದಾಖಲೆಗಳ ಅಕ್ಷರ ರೂಪ ಮತ್ತು ನನ್ನ ಬಾಲ್ಯದಿಂದ ನಾನು ಕಂಡ ಆಕ್ಷಿಕ ದಾಖಲೆಗಳ ಬರಹ ರೂಪ
ಐತಿಹಾಸಿಕ ಪುರಾವೆಗಳು
ಈ ಕ್ಷೇತ್ರ ನಿರ್ಮಾಣವಾದದ್ದು 1200 ವರ್ಷಗಳ ಹಿಂದೆ. ವಿಶಾಲವಾದ ಅಂಗಣ, ಎತ್ತರದ ಬಲಿಕಲ್ಲು, ದೊಡ್ಡ ಹುತ್ತ ,ಎಲ್ಲೂ ಕಾಣಸಿಗದ ಅಪರೂಪದ 16 ಕಂಬಗಳ ತೀರ್ಥ ಮಂಟಪ ,ಸುಮಾರು 6 ಅಡಿ ಎತ್ತರದ ಕರಿಶಿಲೆಯ ಪ್ರಸನ್ನ ಮೂರ್ತಿ ಇವೆಲ್ಲವೂ ಈ ಕ್ಷೇತ್ರ ರಾಜಾಶ್ರಯದಲ್ಲಿ ನಿರ್ಮಾಣವಾದುದು ಎಂದು ಹೇಳುತ್ತಿದೆ. ಇಲ್ಲಿ ಶಾಸ್ತಾವೇಶ್ವರ ವನ ಶಾಸ್ತಾರನಾಗಿದ್ದಾನೆ. ಮಹಾಗಣಪತಿ ಮತ್ತು ದುರ್ಗೆಯ ಗುಡಿಗಳು ತದನಂತರದಲ್ಲಿ ನಿರ್ಮಾಣವಾದವು. ಇಲ್ಲಿರುವ 2 ಶಿಲಾಶಾಸನಗಳು ಓದಲಾಗದ ಸ್ಥಿತಿಯಲ್ಲಿವೆ. ಆದರೂ ಮೇಲ್ನೋಟಕ್ಕೆ ಅವು ದತ್ತಿಶಾಸನದಂತೆ ತೋರುತ್ತಿದೆ. ಕುಂಬಳೆ ಸೀಮೆಯ ಇಮ್ಮಡಿ ಜಯಸಿಂಹನ ಕಾಲದಲ್ಲಿ ಈ ಕ್ಷೇತ್ರ ನಿರ್ಮಾಣವಾಯಿತೆಂದು ಇತಿಹಾಸ ಹೇಳುತ್ತದೆ. ಪಾದೂರು ಗುರುರಾಜ ಭಟ್ಟರ ಪ್ರಾಚೀನ ದಕ್ಷಿಣ ಕನ್ನಡದ ಇತಿಹಾಸ ಕೃತಿಗಳಲ್ಲಿ ಈ ಕ್ಷೇತ್ರದ ಬಗ್ಗೆ ಉಲ್ಲೇಖವಿದೆ ಇದಕ್ಕೆ ಪೂರಕ ಎಂಬಂತೆ ಕುಂಬಳೆ ಸೀಮೆಯ ತಾಳೆಗರಿಲಿಪಿಯಲ್ಲಿ ಕ್ಷೇತ್ರದ ಮತ್ತು ಷೋಡಶ ಮಂಟಪದ ಬಗ್ಗೆ ಮತ್ತು ಇಲ್ಲಿ ನಡೆಯುತ್ತಿದ್ದ ನ್ಯಾಯ ತೀರ್ಮಾನದ ಬಗ್ಗೆ ಉಲ್ಲೇಖವಿದೆ. ಇದನ್ನು ಉದಯವಾಣಿಯ ವರದಿಗಾರ ಮನೋಹರ್ ಪ್ರಸಾದ್ ಬರೆದ ನಮ್ಮೂರು ಲೇಖನದಲ್ಲಿ ತಿಳಿಸಲಾಗಿದೆ.ಇದಲ್ಲದೆ ಬೇಳ ರಾಮ ನಾಯ್ಕರ ಮಂಜೇಶ್ವರ ದಂಡಯಾತ್ರೆ ,ತೆಂಕನಾಡ ಐತಿಹ್ಯ ಪುಸ್ತಕಗಳಲ್ಲಿ ಕ್ಷೇತ್ರದ ಉಲ್ಲೇಖವಿದೆ.. ಮಾಯಿಪ್ಪಾಡಿ ಅರಮನೆಗೂ ಈ ಕ್ಷೇತ್ರಕ್ಕೂ ಇರುವ ಸಂಬಂಧದ ಬಗ್ಗೆ ದಾಖಲೆಗಳು ದೊರೆತಿವೆ.ಮೂಲತ ಇದು ನಡಿಬೈಲು ಜೈನರ ಬೀಡಿಗೆ ಸೇರಿದ ದೇವಸ್ಥಾನವಾಗಿದೆ.
ನಡಿಬೈಲು ಮತ್ತು ಕುಳ್ಳಮುಗೇರು
ಕುಳ್ಳಮುಗೇರಿನಲ್ಲಿದ್ದ ಜೈನ ಮನೆತನ ಬಹಳ ಪ್ರಸಿದ್ಧವಾದುದು. ಆ ಮನೆತನಕ್ಕೆ ವರ್ಕಾಡಿ ಕೋಳ್ಯೂರು ಕಣಂತೂರು ಕೂಟತ್ತಜೆ ಕಡಂಬಾರು ದೇವಸ್ಥಾನಗಳು ಒಳಪಟ್ಟಿದ್ದವು. ಅಲ್ಲಿಂದ ಇಲ್ಲಿನ ಆಡಳಿತ ನೋಡುವುದಕ್ಕೆ ಕಷ್ಟವಾದಾಗ ನಡಿಬೈಲಿನಲ್ಲಿ ಬೀಡು ಸ್ಥಾಪಿಸಿ ಅಲ್ಲಿಂದ ಇಲ್ಲಿನ ಆಡಳಿತವನ್ನು ನೋಡಿಕೊಳ್ಳಲಾಗಿತ್ತು. ಮಂಜೇಶ್ವರ ಸೀಮೆಯ ಸೀಮೆ ದೇವಸ್ಥಾನಗಳು 2. ಒಂದು ವರ್ಕಾಡಿ ಮತ್ತೊಂದು ಕೋಳ್ಯೂರು. ಆ ಬಳಿಕ ಜೈನ ಸಂತತಿಗಳು ನಶಿಸಿಹೋದ ಪರಿಣಾಮ ಜೈನರ ಕೈಕೆಳಗಿದ್ದ ಬಂಟರು ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಕಾಲಾಂತರದಲ್ಲಿ ಈ ಕ್ಷೇತ್ರವನ್ನು ಬಜ ಭಟ್ರ ಮನೆತನ,ಮರಿಕಾಪು ವೆಂಕಟ್ರಮಣಹೊಳ್ಳ,ನಾವಡ್ರಬೈಲು ವೆಂಕಟ್ರಮಣ ನಾವಡ ,ತಾಳಿತ್ತಾಯರು ಕಲ್ಲೂರು ಮನೆತನ ಹೀಗೆ ಅಧಿಕಾರ ಪಸ್ತಾಂತರವಾಗುತ್ತಾ ಹೋಯಿತು.
ಅಷ್ಟಮಂಗಲ ಪ್ರಶ್ನೆ
80ರ ದಶಕದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಈ ಕ್ಷೇತ್ರದ ನಿರ್ಮಾಣದ ಮೂಲ ಸ್ವರೂಪವನ್ನು ಹೀಗೆ ವಿವರಿಸಲಾಗಿದೆ. ಅಂದಿನ ಕಾಲದಲ್ಲಿ ಈ ಮಾರ್ಗವಾಗಿ ಯಾತ್ರಾರ್ಥಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುತ್ತಿದ್ದರಂತೆ. ಈ ಪರಿಸರದಲ್ಲಿಯೂ ಒಂದು ಸುಬ್ರಹ್ಮಣ್ಯ ಕ್ಷೇತ್ರ ಇದ್ದರೆ ಹೇಗೆ ಎಂಬ ಬಗ್ಗೆ ಚರ್ಚೆ ನಡೆದಿತ್ತಂತೆ. ಸದ್ಯ ಈಗಿರುವ ಕ್ಷೇತ್ರದಿಂದ ತುಸುದೂರದಲ್ಲಿರುವ ಮುಗುಳಿ ಎಂಬ ಪ್ರದೇಶದಲ್ಲಿ ಕಾವೀ ಮುನಿ ಎಂಬ ಸನ್ಯಾಸಿಯೊಬ್ಬರು ವಾಸಿಸುತ್ತಿದ್ದರಂತೆ. ಕುಕ್ಕೆಗೆ ತೆರಳಿದ ಯಾತ್ರಾರ್ಥಿಗಳು ಅಲ್ಲಿಂದ ಪ್ರಸಾದರೂಪವಾಗಿ ಪಡೆದ ತೆಂಗಿನಕಾಯಿಯನ್ನು ಕಾವೀ ಮುನಿಯ ಕೈಯಲ್ಲಿ ಕೊಟ್ಟಾಗ ಅದರ ಒಂದು ಭಾಗ ಈಗ ಇರುವ ಕ್ಷೇತ್ರದಲ್ಲಿ ಬಿತ್ತಂತೆ ಅದರ ಪರಿಣಾಮ ಅಂದರೆ ತೆಂಗಿನಕಾಯಿಯ ಒಂದು ಭಾಗ ಒರುಗಡಿ ಬಿದ್ದ ಪ್ರದೇಶ ಕ್ರಮೇಣ ವರ್ಕಾಡಿ ಆಯಿತೆಂದು ತಿಳಿದು ಬಂದಿದೆ. ಉಳಿದ ಅರ್ಧ ತೆಂಗಿನಕಾಯಿಯಲ್ಲಿದ್ದ ಲಿಂಗರೂಪವನ್ನು ಸದ್ಯ ಕ್ಷೇತ್ರದ ಬಿಂಬದ ಪಾಣಿಪೀಠದಲ್ಲಿಟ್ಟು ಅರ್ಚಿಸಲಾಗುತ್ತಿದೆ. 16 ಕಂಬಗಳು ಚಂದ್ರಗಿರಿಯಿಂದ ಬಾರ್ಕೂರು ವರೆಗಿನ 16 ಮಾಗಣೆಗೆ ಸಂಬಂಧ ಪಟ್ಟಿದ್ದು ಎಂಬು ತಿಳಿದು ಬಂದಿದೆ. ಆದರೆ ಮಾಗಣೆಗಳ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಇಲ್ಲ. ಆದರೆ 16 ಮಾಗಣೆಯ ನ್ಯಾಯಾಧೀಶರು 16 ಕಂಬಗಳ ಬುಡದಲ್ಲಿ ಕುಳಿತು ಕ್ಲಿಷ್ಟಕರವಾದ ಸಮಸ್ಯೆಗಳಿಗೆ ನ್ಯಾಯ ತೀರ್ಮಾನ ನೀಡುತ್ತಿದ್ದ ನ್ಯಾಯ ಪೀಠ ಈ ಕ್ಷೇತ್ರವಾಗಿತ್ತು ಎಂಬುದು ತಿಳಿದು ಬಂದಿದೆ.ಸದ್ಯ ಮುಗುಳಿ ಕೋಡಿ ಮನೆತನದವರ ಪ್ರದೇಶಕ್ಕೆ ಒಳಪಟ್ಟು ಅಲ್ಲಿರುವ ಮೂಲಸ್ಥಾನದ ಉಸ್ತುವಾರಿ ಮತ್ತು ಪ್ರತೀ ವರ್ಷ ಜಾತ್ರೋತ್ಸವದ ಸಂದರ್ಭದಲ್ಲಿ ಕಟ್ಟೆ ಪೂಜೆ ಸೇವೆ ನಡೆಸುತ್ತಿದ್ದಾರೆ
ಸುಬ್ರಾಯ ಸುಬ್ರಹ್ಮಣ್ಯ
ಈ ಕ್ಷೇತ್ರದ ಸ್ವಾಮಿಯನ್ನು ಸುಬ್ರಾಯ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಪೂರಕ ಎಂಬಂತೆ ಈಗಲೂ ದೇವಸ್ಥಾನದಲ್ಲಿರುವ ಹಳೆಯ ಪಾತ್ರೆಗಳಲ್ಲಿ ಖಾವೀ ಸುಬ್ರಾಯ ಎಂದಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಖಾ ಎಂದರೆ 4 ವೀ ಎಂದರೆ 2 4+2 ಅಂದರೆ 6 ಮುಖದ ಷಣ್ಮುಖ ಎಂಬರ್ಥದಲ್ಲಿ ಖಾವೀ ಸುಬ್ರಾಯ ಎಂದು ಹೇಳಲಾಗಿದೆ ಎಂಬುದು ಕೆಲವರ ಅಭಿಮತ. ಬಳಿಕ ನಡೆದ ಅಷ್ಟಮಂಗಲ ಪ್ರಶ್ನೆಯ ಬಳಿಕ ಸುಬ್ರಹ್ಮಣ್ಯೇಶ್ವರ ಎಂದಾಗಿದ್ದು ಇದೀಗ ಮತ್ತೆ ಕಾವೀ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಶಿವಪುತ್ರ ಇಲ್ಲಿ ಆರಾದಿಸ್ಪಡುತ್ತಿದ್ದಾನೆ.ಕಾವೀ ಮುನಿಯ ಕಾರಣದಿಂದ ಕಾವೀ ಸುಬ್ರಹ್ಮಣ್ಯ ಎಂಬ ಹೆಸರು ಹೆಚ್ಚು ಪ್ರಸ್ತುತವಾಗಿದೆ.
ಕ್ಷೇತ್ರ ಅಂದು
ನನ್ನ ಅಜ್ಜ ನಾರಾಯಣಪ್ಪಯ್ಯ ಈ ಊರಿಗೆ ಬಂದಿದ್ದು 1941ರಲ್ಲಿ ಆಗ ಇಲ್ಲಿ ದೇವಕಾರ್ಯವನ್ನು ಕೃಷ್ಣಮ್ಮ ಎಂಬವರ ಮನೆಯವರು ಮಾಡುತ್ತಿದ್ದರಂತೆ ಆ ಕಾಲದಲ್ಲಿ ದೇವಸ್ಥಾನದಲ್ಲಿ 3 ಹೊತ್ತು ಬಲಿ ನಡೆಯುತ್ತಿತ್ತು. 1955ರ ವರೆಗೂ ನಿತ್ಯ ಬಲಿ ನಡೆಯುತ್ತಿತ್ತು. ನಿತ್ಯ ಬಲಿಯ ನೈಮಿತ್ತಕ ಕಾರ್ಯಗಳಿಗೆ ದೇವಸ್ಥಾನದ ಭೂಮಿಯನ್ನು ಉಂಬಳಿ ಬಿಡಲಾಗಿತ್ತು. ದೇವಸ್ಥಾನದ ಎದುರಿರುವ ಹೊಳೆಯ ಬದಿಯ ಗದ್ದೆಯನ್ನು ಬೆಳಗ್ಗಿನ ಪೂಜೆಗೆ ನೀಡಬೇಕಾದ ಅರಳಿನ ಬಾಬ್ತು ಸುಣ್ಣಂಗುಳಿ ಮನೆಯವರಿಗೆ ಉಂಬಳಿ ನೀಡಲಾಗಿತ್ತು. ಕುರುಡಪದವು ಮನೆಯವರು ಈ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ತೊಡಗಿದ್ದರು ಎಂಬುದೂ ತಿಳಿದು ಬಂದಿದೆ. ಪ್ರತೀ ವರ್ಷ ದೀಪಾವಳಿಯಿಂದ ಷಷ್ಠಿ ಉತ್ಸವದ ವರೆಗೆ ಅವಲಕ್ಕಿ ಮತ್ತು ಬಣ್ಣಂಗಾಯಿ ನೈವೇದ್ಯವಾಗುವ ಪರಿಪಾಠವಿದೆ. ಅದಕ್ಕಾಗಿ ಆನಂದ ಪುರುಷರು ಬಹಳ ಮಡಿಯಿಂದ ಒಂದು ಮುಡಿ ಅವಲಕ್ಕಿ ತಂದು ಒಪ್ಪಿಸುತ್ತಿದ್ದರು ಈ ಕಾರ್ಯಕ್ಕೂ ಕ್ಷೇತ್ರದಿಂದ ಉಂಬಳಿ ಇತ್ತೆಂದು ಹೇಳಲಾಗುತ್ತಿದೆ. ಅಪ್ಪಣ್ಣು ಮೊಯಿಲಿಗೆ ಕ್ಷೇತ್ರದ ಸ್ವಚ್ಛತೆಗಾಗಿ ಉಂಬಳಿ ಬಿಡಲಾಗಿತ್ತು. ದಾಸರ ಹಿತ್ತಿಲು ಎಂಬಲ್ಲಿದ್ದ ದಾಸಯ್ಯ ನಿತ್ಯ ದೇವಸ್ಥಾನಕ್ಕೆ ಬಂದು ಶಂಖ ಊದುವ ಕ್ರಮವಿತ್ತು. ಅದಲ್ಲದೆ ಕೋಟಿ ಮೊಯಿಲಿ ಎಂಬವರಿಗೆ ಈಗಿನ ನೈಮೊಗೆರುಎಂಬಲ್ಲಿ ಸುಮಾರು 18 ಮುಡಿ ಭತ್ತದ ಜಾಗೆಯನ್ನು ಮರಿಕಾಪು ಆಡಳಿತ ಸಂದರ್ಭದಲ್ಲಿ ನೀಡಲಾಗಿದ್ದು ಕಾಲಕ್ರಮೇಣ ಅದು ಸಾಗುವಳಿ ಮಾಡಲಾಗದ ಸ್ಥಿತಿಯಲ್ಲಿ ಅದನ್ನು ಏಲಂ ಮಾಡಿದಾಗ ತಾಳಿತ್ತಾಯ ಮನೆಯವರು ಖರೀದಿ ಮಾಡಿದ್ದರಂತೆ. ಆ ಕಾಲದಲ್ಲಿ ಈಗಿನ ಬಜ ಪ್ರದೇಶದ ಕಟ್ಟಹುಣಿ ಗಾಡಿ ಬರುವಷ್ಟು ಅಗಲವಾಗಿದ್ದು ಅದರಲ್ಲಿ ಗಾಡಿ ಸಂಚಾರ ಇತ್ತೆಂದು ತಿಳಿದು ಬಂದಿದೆ. 1917-18ರ ವರೆಗೂ ದೇವಸ್ಥಾನಕ್ಕೆ ಸುತ್ತ ಮುಳಿ ಹುಲ್ಲಿನ ಛಾವಣಿ ಇದ್ದು ಅದು ಅಗ್ನಿ ಆಕಸ್ಮಿಕದಿಂದ ನಾಶವಾಯಿತು 1930ರ ಆಸುಪಾಸಿನಲ್ಲಿ ಶ್ರೀ ಕ್ಷೇತ್ರಕ್ಕೆ 330 ಮುಡಿ ಅಕ್ಕಿಯ ಭೂಮಿ ಇತ್ತೆಂದು ಹೇಳಲಾಗುತ್ತಿದೆ. ಆ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಪೆರ್ವಣ್ಣಾಯರು ಎಂಬವರು ತಂತ್ರಿ ಮತ್ತು ಪವಿತ್ರ ಪಾಣಿಯಾಗಿದ್ದರು. ಅವರು ಈಗಿನ ದೇವಂದಪಡ್ಪು ಪ್ರದೇಶದಲ್ಲಿದ್ದು ಅವರಿಗೆ 770 ಮುಡಿ ಆಸ್ತಿ ಇತ್ತಂತೆ. ಅವರು ಈಗಿನ ಕಾಪ್ರಿ ಶಾಲೆಯ ಬುಡದಲ್ಲಿದ್ದ ಮನೆಯಲ್ಲಿ ಮುನ್ನೂರು ಮನೆತನಕ್ಕೆ ಸೇರಿದ ತಂತ್ರಿಗಳನ್ನು ತಂದು ನೇಮಿಸಿದರಂತೆ. ಮನೆಯಲ್ಲಿದ್ದ ಒಬ್ಬ ಹೆಣ್ಣು ಮಗಳು ಈಗಿನ ಶರವು ರಾಘವೇಂದ್ರ ಶಾಸ್ತ್ರಿಗಳ ಅಜ್ಜಿ. ತದನಂತರ ಅದೇ ಮುನ್ನೂರು ಮನೆತನಕ್ಕೆ ಸೇರಿದ ಈಗಿನ ತಂತ್ರಿಗಳಾದ ದಿನೇಶ್ ಕೃಷ್ಣ ತಂತ್ರಿಯವರ ಕುಟುಂಬಿಕರು ಶ್ರೀ ಕ್ಷೇತ್ರದ ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ..ಈ ಕಾರಣದಿಂದ ಕಾಪ್ರಿ ಶಾಲೆಯ ಸಮೀಪದ ತಂತ್ರಿಪಾಲು, ಮಠ ಮತ್ತಿತರ ಪ್ರದೇಶಗಳು ಉಲ್ಲೇಖವಾಗಿವೆ.1946ರ ಸುಮಾರಿಗೆ ಬ್ರಿಟಿಷ್ ಸರಕಾರ ಬೆಳೆದ ರೈತ ಹೆಚ್ಚಿನ ಧವಸ ಧಾನ್ಯಗಳನ್ನು ತನ್ನ ಬಳಿ ಇಟ್ಟುಕೊಳ್ಳುವಂತಿಲ್ಲ ಎಂಬ ಕಾನೂನನ್ನು ಜಾರಿಗೊಳಿಸಿತ್ತು, ಈ ಸಂಬಂಧ ಮದ್ರಾಸ್ ಹೈಕೋರ್ಟ್ ನಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟ ದಾವೆ ಇದೆ. ಒಂದು ಕಾಲದಲ್ಲಿ ಸುಬ್ರಹ್ಮಣ್ಯ ದೇವರಿಗೆ ಸಾಕಷ್ಟು ಚಿನ್ನ ಬೆಳ್ಳಿಯ ಆಭರಣಗಳಿದ್ದು ಕಾಲಾಂತರದಲ್ಲಿ ಕೆಲವು ಕಣ್ಮರೆಯಾಗಿವೆ. ಒಂದು ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಚುಕ್ಕಾಣಿಗೆ ಯಾರೂ ಇಲ್ಲದ ಸಂದರ್ಭದಲ್ಲಿ 1941ರಲ್ಲಿ ಕಲ್ಲೂರು ಮನೆತನದ 1000 ಮುಡಿ ಅಕ್ಕಿಯ ಒಡೆಯ ಲಿಂಗಪ್ಪ ಭಂಢಾರಿ ಶ್ರೀ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡರು. ಆಗಿನ ಕಾಲದಲ್ಲಿ ಲಿಂಗಪ್ಪ ಭಂಡಾರಿಯವರಿಗೆ ಗನ್ ಮ್ಯಾನ್ ಇದ್ದರಂತೆ. ನಂತರ 1957ರಲ್ಲಿ ವಿಶ್ವನಾಥ ಅಡಪ್ಪರು ಅಧಿಕಾರ ವಹಿಸಿಕೊಂಡರು ಈ ಸಂದರ್ಭದಲ್ಲಿ ಪ್ರಭಾರ ಮೋಕ್ತೇಸರರಾಗಿ ತಿಮ್ಮಪ್ಪ ಅಡಪ್ಪರೂ ಒಂದು ವರ್ಷ ಆಡಳಿತ ನಡೆಸಿದ್ದರು.ಅವರು ಸೇವಾರೂಪದಲ್ಲಿ ದೇವರಿಗೆ ಚಿನ್ನದ ಕಟ್ಟುಳ್ಳ ರುದ್ರಾಕ್ಷಿ ಮಾಲೆಯನ್ನು ನೀಡಿದ್ದರು.ತದನಂತರ ಸರಕಾರ ಉಳುವವನೇ ಹೊಲದೊಡೆಯ ಕಾನೂನಿನಿಂದ ಬಹುತೇಕ ಆಸ್ತಿಗಳು ಒಕ್ಕಲಿನವರ ಪಾಲಾದ ಮೇಲೆ ಕ್ಷೇತ್ರ ಅವನತಿಯತ್ತ ಸಾಗಿತು. ಒಂದು ಕಾಲ ಘಟ್ಟದಲ್ಲಿ ದೇವರಿಗೆ ಹಬ್ಬದ ಸಂದರ್ಭದಲ್ಲಿ ಅವಲಕ್ಕಿ ತರುವುದಕ್ಕೂ ತತ್ವಾರವಾಗಿತ್ತು. ಈ ಸಂದರ್ಭದಲ್ಲಿ ಸೇವಾಸಮಿತಿಯ ಪರಿಕಲ್ಪನೆ ಹುಟ್ಟಿ 1976ರ ರಲ್ಲಿ ಸೇವಾ ಸಮಿತಿ ಅಸ್ತಿತ್ವಕ್ಕೆ ಬಂತು. ಈ ಸಂದರ್ಭದಲ್ಲಿ ಸುಬ್ರಾಯ ನಾವಡರಂತಹ ಹಲವು ಭಕ್ತರು ತಮ್ಮಲ್ಲಿರುವ ದವಸ ಧಾನ್ಯ ಅಡಿಕೆ ಇತ್ಯಾದಿಗಳನ್ನು ಮಾರಿ ಊರಿನ ಜನರಲ್ಲಿ ಕಾಡಿ ಬೇಡಿ ನಿತ್ಯ ನೈಮಿತ್ತಿಕಗಳು ನಡೆಯುವಂತೆ ನೋಡಿಕೊಂಡರು. 1980ರ ದಶಕದಲ್ಲಿ ಸೇವಾಸಮಿತಿಗೆ ಅಧ್ಯಕ್ಷರಾಗಿ ಸರ್ಕುಡೇಲು ಮಹಾಬಲೇಶ್ವರ ಭಟ್ ಅಧಿಕಾರ ಸ್ವೀಕರಿಸಿ ಹಲವಾರು ಕಾರ್ಯಗಳನ್ನು ಕೈಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಜದ ಅಡಿಕೆ ತೋಟ ಮತ್ತು ನಡಿಬೈಲು ಸಮೀಪವಿರುವ ಒಂದು ಕೃಷಿ ಭೂಮಿ ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ದೊರೆಯಿತು. 1986ರಲ್ಲಿ ನಡೆದ ಷಷ್ಠಿ ಉತ್ಸವದ ಸಂದರ್ಭದಲ್ಲಿ ಬಲಿ ಒಳಗಾಗುವ ಮುನ್ನ ನಡೆಯುವ ಪ್ರಸಾದ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರವಾಗಬೇಕೆಂಬ ಕಾರಣದಿಂದ ಸಮಿತಿಗೆ ಪ್ರಸಾದ ನಿರಾಕರಿಸಲಾಗಿತ್ತು. .ಬಳಿಕ ಸೇವಾಸಮಿತಿ ಜೀರ್ಣೋದ್ಧಾರದ ಪಣತೊಟ್ಟಿತು. ಈ ಸಂದರ್ಭದಲ್ಲಿ ರಾಮಕೃಷ್ಣ ನಾವಡ ಕೋಡಿ ರಾಮ ಹೊಳ್ಳ, ನಡಿಬೈಲು ಚಂದ್ರಹಾಸ ಮೇಲಂಟ, ಪಿ ಎನ್ ಸುಬ್ಬರಾವ್ ,ಅನಂತರಾಮ ಹೊಳ್ಳ ,ನರ್ಸಪ್ಪಯ್ಯ ಹೊಳ್ಳ ಸೇರಿದಂತೆ ಹಲವು ಮಹನೀಯರು ಊರಿನ ಭಕ್ತಾದಿಗಳ ನೆರವಿನಿಂದ ಅವಿರತ ಸೇವೆ ಸಲ್ಲಿಸಿದರು. ಈ ಕ್ಷೇತ್ರದ ಬಗ್ಗೆ ಹೇಳಲೇಬೇಕಾದ ವ್ಯಕ್ತಿಗಳೆಂದರೆ ನಾರಾಯಣ ನಾಯ್ಕರು,ಪದ್ಮಾವತಿ ಅಮ್ಮ,ಸುಬ್ರಾಯ ನಾವಡರು ಸೀತಾರಾಮ ಮಯ್ಯರು.ಮತ್ತು ಸೇಸಪ್ಪ ದೇವಾಡಿಗರು. ತನ್ನ ಕಷ್ಟದ ದಿನಗಳಲ್ಲೂ ನಿರಂತರವಾಗಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆಸುತ್ತಿದ್ದವರು ಸೀತಾರಾಮ ಮಯ್ಯರು.ಸುಮಾರು 1941 ರಿಂದ ಶ್ರೀ ಕ್ಷೇತ್ರದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡ ಸುಬ್ರಾಯ ನಾವಡರು ಮನೆ ಮನೆಗೆ ತೆರಳಿ ಪ್ರತೀವಾರದ ದೀಪಾರಾಧನೆ ಸೇವೆಗೆ ಮತ್ತು ಪ್ರತೀ ತಿಂಗಳು ನಡೆಯುತ್ತಿದ್ದ ಸತ್ಯನಾರಾಯಣ ಪೂಜೆಗೆ ಸೇವಾಕರ್ತರನ್ನು ಹುಡುಕಿ ಪೂಜೆ ನಡೆಸುತ್ತಿದ್ದರು. ಅವರು 1960ರ ದಶಕದಲ್ಲಿ ಆರಂಭಗೊಂಡ ಷಣ್ಮುಖ ಸುಬ್ರಾಯ ಭಜನಾ ಮಂಡಳಿಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಬಾರಿ ನಾರಾಯಣ ನಾಯ್ಕರು ಮತ್ತು ಸುಬ್ರಾಯ ನಾವಡರು ಲಾಟೀನು ಹಿಡಿದು ಸೇವಾಕರ್ತರ ಮನೆಬಾಗಿಲಿಗೆ ಪ್ರಸಾದ ತಲುಪಿಸಿದ್ದರು.ಈ ಸಂದರ್ಭದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ಸತ್ಯನಾರಾಯಣ ಪೂಜೆ ನಡೆಸುತ್ತಿದ್ದವರು ನೈಮೊಗೆರು ಲಕ್ಷ್ಮೀನಾರಾಯಣ ಅಲೆವೂರಾಯರು.ಒಂದು ಬಾರಿಯಂತೂ ಸತ್ಯನಾರಾಯಣ ಪೂಜೆ ನಡೆಸಿ ಮನೆಗೆ ಹೋಗುವ ಸಂದರ್ಭ ನೆರೆಯಲ್ಲಿ ಕೊಚ್ಚಿಹೋಗಿ ಪವಾಡಸದೃಶವಾಗಿ ಬದುಕುಳಿದಿದ್ದರು ಅಲೆವೂರಾಯರು. ಅಂದಿನ ಕಷ್ಟದಿನಗಳಲ್ಲಿ ಊರಿನ ಹಲವಾರು ಮನೆಯವರು ನಿರಂತರ ಸಹಕಾರವನ್ನೂ ನೀಡುತ್ತಾ ದೇವಳದ ನೈಮಿತ್ತಿಕ ಕಾರ್ಯಗಳು ನಿರಂತರವಾಗಿ ನಡೆಯುವುದಕ್ಕೆ ತಮ್ಮ ಸೇವಾರೂಪದ ಸಹಕಾರ ನೀಡುತ್ತಾ ಬಂದಿದ್ದರು. ವಿವಿಧ ಪ್ರದೇಶಗಳಲ್ಲಿದ್ದ ದೇವಸ್ಥಾನಕ್ಕೆ ಸಂಬಂಧ ಪಟ್ಟವರನ್ನು ಕರೆತಂದವರು ನನ್ನ ದೊಡ್ಡಪ್ಪ . ದುರ್ಗಾದಾಸ್ ಭಂಡಾರಿಯವರನ್ನು ಕರೆತಂದು ಮೊಕ್ತೇಸರರನ್ನಾಗಿ ಮಾಡುವಲ್ಲಿ ಸುಬ್ರಾಯರು ಮಹತ್ತರ ಪಾತ್ರ ವಹಿಸಿದ್ದರು. 1986ರರಲ್ಲಿ ಉಳಿಯತ್ತಾಯರ ಮಾರ್ಗದರ್ಶನದಲ್ಲಿ ದಿನೇಶ್ ಕೃಷ್ಣ ತಂತ್ರಿಯವರು ಅಷ್ಟಬಂಧ ಬ್ರಹ್ಮಕಲಶ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಎದುರು ಪೌಳಿ ಮತ್ತು ತೀರ್ಥಮಂಟಪ ನವೀಕರಣಗೊಂಡಿತು. ದೇವಳದ ಮುಂಭಾಗದಲ್ಲಿದ್ದ ವಿಶಾಲ ಜಗಲಿಯನ್ನು ಕೆಡವಲಾಯಿತು.. ನಂತರ ಶ್ರೀಪತಿ ಮಾಸ್ಟರ್, ರಾಮಣ್ಣ ನಾಯ್ಕ್ ಚಂದ್ರಹಾಸ ಮೇಲಂಟ ಮುಂತಾದವರು ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು. ಬಳಿಕ 2008ರಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಗೋಪಾಲ ಶೆಟ್ಟಿ ನೆತ್ಯರ ಅಧ್ಯಕ್ಷತೆಯಲ್ಲಿ ಶ್ಯಾಮವಿಠಲ ಹೊಳ್ಳ ಕೋಡಿಯವರ ಕಾರ್ಯದರ್ಶಿತ್ವದಲ್ಲಿ ಅದ್ಭುತ ಭಕ್ತಿ ಕಾರ್ಯ ಸಂಪನ್ನಗೊಂಡಿತು. ಊರ ಪರವೂರ ಭಕ್ತರು ಅಹೋರಾತ್ರಿ ತನುಮನಧನ ರೀತಿಯ ಸಹಕಾರ ನೀಡಿ ಶ್ರೀ ಕ್ಷೇತ್ರದ ಮಹತ್ಕಾರ್ಯದಲ್ಲಿ ಭಾಗಿಯಾದರು.ಇನ್ನೊಂದು ಅದ್ಭುತ ಕಾರ್ಯಕ್ರಮ 2013ರ ನಾಗ ತನುಮಂಡಲ ಸೇವೆ. ಸುಭಾಸ್ ಅಡಪ್ಪರ ಅದ್ಯಕ್ಷತೆ ಮತ್ತು ಶಂಕರ್ ಕೋಡಿಯವರ ಕಾರ್ಯದರ್ಶಿತ್ವದಲ್ಲಿ ಹಿಂದೆಂದೂ ಕಾಣದ ಜನಸ್ತೋಮ ಒಪ್ಪ ಓರಣದ ಕಾರ್ಯಕ್ರಮ ವರ್ಕಾಡಿ ಕ್ಷೇತ್ರದ ಇತಿಹಾಸದಲ್ಲಿ ದಾಖಲಾಯಿತು. ಸದ್ಯ ಕಲ್ಲೂರು ಮನೆತನಕ್ಕೆ ಸೇರಿದ ದುರ್ಗಾದಾಸ್ ಭಂಡಾರಿಯವರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಶ್ಯಾಮ ವಿಠಲ ಹೊಳ್ಳ ಕೋಡಿ ,ವಿಕ್ರಮದತ್ತ ,ಸುಭಾಸ್ ಅಡಪ್ಪ, ಶಶಿ ನಾಯ್ಕ್ ಪೊಯ್ಯೆ, ಮೊಕ್ತೇಸರರಾಗಿದ್ದಾರೆ, ಪ್ರಭಾಕರ ರೈ ಕಲ್ಪಣೆ ಅಧ್ಯಕ್ಷತೆಯ ಕ್ಷೇತ್ರದ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಕ್ಷೇತ್ರ ಮುಖ್ಯ ಅರ್ಚಕರಾಗಿ ವಾಸುದೇವ ಮಯ್ಯ,ಪಾಠಾಳಿಯಾಗಿ ಮೋಹನ್ ರಾವ್ ಮತ್ತು ಪದಾರ್ಥಿಗಳಾಗಿ ಸೇಸಪ್ಪ ದೇವಾಡಿಗರ ಮಕ್ಕಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ನಿತ್ಯ ಕಾರ್ಯಗಳ ಮೇಲ್ವಿಚಾರಣೆಯನ್ನು ನರ್ಸಪ್ಪಯ್ಯ ನಾವಡರು ನೋಡಿಕೊಳ್ಳುತ್ತಿದ್ದು ಗೋಪಾಲ ಕಲ್ಮಾರ್ ಹಾಗೂ ರತ್ನಾಕರ ನಾಯ್ಕ್ ಸಹಕಾರ ನೀಡುತ್ತಿದ್ದಾರೆ.ಪ್ರತೀ ವರ್ಷ ಜಾತ್ರೆಯ ಸಂದರ್ಭದಲ್ಲಿ ಚಾವಡಿಬೈಲ್ ಚೇಂಡೇಲ್ ಪರಿಸರದ ಕುಲಾಲ ಸಮುದಾಯದವರು ನೈ ಮುಗೇರ್ ಪರಿಸರದ ಪದ್ಮಶಾಲೀ ಸಮುದಾಯದವರು ಅಲ್ಲದೆ ಬಾಳೆಹಿತ್ಲು ಮುಟ್ಟಿಕಲ್ಲು ಪರಿಸರದ ಪೂಜಾರಿ ಸಮುದಾಯದವರು ಅಂಗಣವನ್ನು ಸ್ವಚ್ಚಗೊಳಿಸುವ ಮತ್ತಿತರ ಕಾರ್ಯ ನಡೆಸುತ್ತಾ ಬಂದಿದ್ದಾರೆ. ಪೂವಪ್ಪ ಮುಟ್ಟಿಕಲ್ ಪ್ರತೀ ವರ್ಷ ಜಾತ್ರೋತ್ಸವದ ಸಂದರ್ಭದಲ್ಲಿ ಉಗ್ರಾಣದ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಕದಿನ ಸಡುಮದ್ದಿನ ವ್ಯವಸ್ಥೆಯನ್ನು ಭಾಸ್ಕರ ನೈ ಮೊಗೆರು ಸದ್ಯ ನಡೆಸುತ್ತಿದ್ದಾರೆ.ಪ್ರತೀ ರಂಗಪೂಜೆಯ ಸಂದರ್ಭದಲ್ಲಿ ಮತ್ತು ಜಾತ್ರೋತ್ಸವದ ಸಂದರ್ಭದಲ್ಲಿ ಮಡಿವಾಳ ಸಮುದಾಯದವರು ಕೊಡಿ, ಮಡಿ ವಸ್ಥ್ರ ದೀವಟಿಗೆ ಕಾರ್ಯವನ್ನು ನಡೆಸುತ್ತಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ನಾಲ್ಕು ಬಾರಿ ಹಿರಿರಂಗಪೂಜೆ ನಡೆದಿದೆ
- 1942-43 ಲಿಂಗಪ್ಪ ಭಂಡಾರಿಯವರು ಉಸ್ತುವಾರಿಯಲ್ಲಿ
- 1962 ರಲ್ಲಿ ಅಷ್ಟಗ್ರಹ ಯೋಗ ದೇಶವನ್ನು ಬಾಧಿಸಿದಾಗ
- 1986 ಶ್ರೀ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶದ ಸಂದರ್ಭ
- 2009 ಇತ್ತೀಚಿನ ಬ್ರಹ್ಮಕಲಶದ ಸಂದರ್ಭ
ಶ್ರೀ ಕ್ಷೇತ್ರದ ಅರ್ಚಕವೃಂದ
1941ರಲ್ಲಿ ಶ್ರೀ ಕ್ಷೇತ್ರದಲ್ಲಿ ಅರ್ಚಕರಾಗಿದ್ದವರು ಶಂಕಣ್ಣಯ್ಯ ಅಂದರೆ ಪುಟ್ಟಣ್ಣ ಮಾಸ್ಟ್ರ ತಂದೆಯವರು. ಪುಟ್ಟಣ್ಣ ಮಾಸ್ಟ್ರು ಕಾಪ್ರಿ ಶಾಲೆಯಲ್ಲಿ ಅದ್ಯಾಪಕರಾಗಿದ್ದವರು ಬಹಳ ಕಟ್ಟನಿಟ್ಟು. ಅವರು ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರಂತೆ. ಆ ಬಳಿಕ ಬಜ ಭಟ್ರೇ ಪೂಜೆ ನಡೆಸುತ್ತಿದ್ದರು. ದೇವಸ್ಥಾನದ ಆಡಳಿತವೂ ಅವರ ಕೈಯಲ್ಲಿತ್ತು. ನಿತ್ಯ ಬಲಿಯೂ ಅವರೇ ನೆರವೇರಿಸುತ್ತಿದ್ದರು. ಒಂದು ಸಂದರ್ಭದಲ್ಲಿ ಕೃಷ್ಣ ಮಯ್ಯರು ಮತ್ತು ನಾರಾಯಣ ಮಯ್ಯರು ಎಂಬ ಸಹೋದರರು ಪೂಜೆ ಮೇಲ್ ಶಾಂತಿ ಮತ್ತು ಕೀಳ್ ಶಾಂತಿ ಎರಡನ್ನೂ ನೋಡಿಕೊಳ್ಳುತ್ತಿದ್ದರು. ಇದಲ್ಲದೆ ಕುರುಡಪದವು ಮತ್ತು ತೋಟ ಮನೆಯವರು ಸರದಿ ಪ್ರಕಾರದಲ್ಲಿ ಪೂಜೆ ನಡೆಸುತ್ತಿದ್ದರು. ತೋಟ ಮನೆಯವರು ಸದ್ಯ ಕೇರಳದಲ್ಲಿ ವಾಸವಾಗಿದ್ದು ಪ್ರತೀ ವರ್ಷ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಸಂತರ 2 ವರ್ಷಗಳ ಕಾಲ ಉಡುಪಿಯ ವೇದವ್ಯಾಸ ಭಟ್ ಎಂಬವರು ಪೂಜೆ ಮಾಡುತ್ತಿದ್ದರು. ಆ ಬಳಿಕ ನಿಯುಕ್ತಿಗೊಂಡವರು ಪರಮ ಸಾಧ್ವಿ ಸೀತಾರಾಮ ಮಯ್ಯರು ಈಗಿನ ಅರ್ಚಕರಾದ ವಾಸುದೇವ ಮಯ್ಯರ ತಂದೆ. ನಾರಾಯಣ ಮಯ್ಯರ ಬಗ್ಗೆ ಹೇಳಲೇಬೇಕಾದ್ದು ಎಂದರೆ ಅವರ ದೇವರು ಹೊರುವ ಪರಿ. ಬಲಿ ಉತ್ಸವದಲ್ಲಿ ನಾರಾಯಣ ಮಯ್ಯರಂತೆ ದೇವರು ಹೊರುವವರು ಇನ್ನೊಬ್ಬರಿಲ್ಲ ಅನ್ನುವಷ್ಟರಮಟ್ಟಿಗೆ ಖ್ಯಾತರು. ಅವರ ಓಡಬಲಿಗೆ ದೂಳು ಹಾರುತ್ತಿತ್ತಂತೆ. ಅವರ ಮಾವನವರಾದ ಕೋಳ್ಯೂರು ಮಾದಪ್ಪಯ್ಯ ದೇವರು ಹೋರುವುದರಲ್ಲಿ ಪ್ರಸಿದ್ದರು ಅವರಂತೆ ನಾರಾಯಣ ಮಯ್ಯರ ಉತ್ಸವ ಎಂದರೆ ಭಕ್ತಿ ಭಯದ ಪರಾಕಾಷ್ಟೆ. ಆ ಬಳಿಕ ಶ್ರೀ ಕ್ಷೇತ್ರದಲ್ಲಿ ಉತ್ವಕ್ಕೆ ಬರುತ್ತಿದ್ದವರು ಪೊಯ್ಯೆದಗುಡ್ಡೆ ಗಣಪತಿ ಭಟ್ಟರು ಅವರು ಅದ್ಭುತ ವ್ಯಕ್ತಿ ಒಂದು ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುನ್ನುಡಿ ಬರೆದವರು ಅವರೇ ಸದ್ಯ ಅವರ ತಮ್ಮನ ಮಗ ರಾಜ ಶ್ರೀ ಕ್ಷೇತ್ರದ ಉತ್ಸವದಲ್ಲಿ ಬಲಿ ಉತ್ಸವ ನಡೆಸುತ್ತಿದ್ದಾರೆ. ಇದಲ್ಲದೆ ಪ್ರಭಾಕರ ಮಯ್ಯರು ಅನಂತರಾಮ ಭಟ್ಟರು ಶ್ರೀ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ ಈಗಿನ ಬಲಿ ಉತ್ಸವದಲ್ಲಿ ಸುಬ್ರಹ್ಮಣ್ಯ ಮಯ್ಯರು,, ವಾಸುದೇವ ಮಯ್ಯರು, ಗಣೇಶ್ ಮಯ್ಯರು ದೇವರ ಹೊರುವ ಕಾರ್ಯ ನಡೆಸುತ್ತಿದ್ದಾರೆ. 2005ರ ಸುಮಾರಿನಲ್ಲಿ ಮದ್ಯಾಹ್ನದ ಬಲಿ ಉತ್ಸವದ ವೇಳೆ ಸುಬ್ರಹ್ಮಣ್ಯ ಮಯ್ಯರು ದೇವರು ಹೊತ್ತಿದ್ದರು. ಸಂದರ್ಭದಲ್ಲಿ ದೇವರಿಗೆ ಬ್ರಹ್ಮಕಲಶ ನಡೆಯಬೇಕಂಬ ಅಭಯವಾಗಿತ್ತು. ಆಡಳಿತ ಮಂಡಳಿ 3 ವರ್ಷಗಳ ಗಡುವು ಕೇಳಿ ಬಳಿಕ 2009 ರಲ್ಲಿ ಬ್ರಹ್ಮಕಲಶೋತ್ಸವ ನಡೆಯಿತು. ಲಿಂಗಪ್ಪ ಭಂಡಾರಿಯವರ ಕಾಲದ ಬಳಿಕ ಶ್ರೀ ಕ್ಷೇತ್ರಕ್ಕೆ 110 ಮುಡಿ ಆಸ್ತಿ ಇತ್ತಂತೆ. ದೇವಸ್ಥಾನದ ಸುತ್ತ ಸುಡಲ ಕಂಡ ಅಂದರೆ ಸುಡುಮದ್ದಿನ ಪ್ರದೇಶ ನೇಮದ ಕಂಡ ಎನ್ನುವ ಪ್ರದೇಶಗಳು ಇದ್ದವು.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಕೂಟತ್ತಜೆ ಉಳ್ಳಾಲ್ತಿ ದೈವದ ಭೇಟಿ ಇತ್ತಂತೆ ಇದಕ್ಕೆ ಪೂರಕವಾಗಿ ಪ್ರತೀ ವರ್ಷ ಜಾತ್ರೆ ಸಂದರ್ಭದಲ್ಲಿ ಉಳ್ಳಾಲ್ತಿ ಭೇಟಿಯನ್ನು ನಡೆಸಲಾಗುತ್ತಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟು ಮಂದ್ರಾಯ ಮತ್ತು ದೈವದ ಸಾನ್ನಿದ್ಯ ಉಲ್ಲೇಖವಾಗಿದೆ.
ದೇವರ ರುದ್ರಾಕ್ಷಿ ಮಾಲೆ
ತಿಮ್ಮಪ್ಪ ಅಡಪರು ನೀಡಿದ ರುದ್ರಾಕ್ಷಿ ಮಾಲೆ ಸದ್ಯ ದೇವರ ಅಟ್ಟೆಕನ್ನಡಿಯಲ್ಲಿ ಬಳಸಲಾಗುತ್ತಿದೆ. ಮತ್ತು ತುಲಾಭಾರ ಹರಕೆಯವರ ಕೊರಳಿಗೆ ಹಾಕಲಾಗುತ್ತಿದೆ. ಆದರೆ ಈ ರುದ್ರಾಕ್ಷಿ ಮಾಲೆಯನ್ನು ದೇವರು ಹೊರುವವರು ಹಾಕಿದರೆ ಆವೇಶ ಬರುತ್ತದೆ ಎಂಬ ಪ್ರತೀತಿ ಇದೆ. ಈ ಕಾರಣದಿಂದ ಅಟ್ಟೆಕನ್ನಡಿಯ ಸತ್ತಿಗೆಗೆ ಹಾಕಲಾಗುತ್ತಿದೆ.
1976
ಶ್ರೀ ಕ್ಷೇತ್ರ ಭಕ್ತಿಯ ತಾಣ ಮಾತ್ರವಲ್ಲ ಸಾಂಸ್ಕೃತಿಕ ಆಡೊಂಬಲ. ಯಕ್ಷಗಾನದ ಮಟ್ಟಿಗೆ ಪುಣ್ಯಭೂಮಿ. 1976ಕ್ಕೆ ಮೊದಲು ಕಪಣಮೊಗರು ಉಳ್ಳಾಲ್ತಿ ಕಟ್ಟೆಯಲ್ಲಿ ತಾಳ ಮದ್ದಳೆ ಕೂಟ ನಡೆಯುತ್ತಿತ್ತಂತೆ. ಅಲ್ಲಿಂದ 1976ಕ್ಕೆ ಶ್ರೀ ಕ್ಷೇತ್ರಕ್ಕೆ ವರ್ಗಾವಣೆಗೊಂಡು ಶ್ರೀ ಕಾವೀ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಆರಂಭವಾಯಿತು.ಪ್ರತೀ ತಿಂಗಳು ಅಹೋರಾತ್ರಿ ತಾಳಮದ್ದಳೆ ಕೂಟ ನಡೆಯುತ್ತಿತ್ತು, ಮುಂದಿಲ ಕೃಷ್ಣ ಭಟ್ಟರು ಯಕ್ಷಗುರುಗಳಾಗಿದ್ದರು. ಲಕ್ಷ್ಮೀನಾರಾಯಣ ಅಲೆವೂರಾಯರು, ರಾಮ ಹೊಳ್ಳರು,ದಿನೇಶ್ ಕೃಷ್ಣ ತಂತ್ರಿಯವರು, ನನ್ನ ದೊಡ್ಡಪ್ಪ ಸುಬ್ರಾಯರು ,ತಂದೆ ಸೀತಾರಾಮ ರಾವ್ ಚಿಕ್ಕಪ್ಪ ರಾಧಾಕೃಷ್ಣ ರಾವ್ ಸರ್ಸಪ್ಪಯ್ಯ ನಾವಡರು ಮಾಧವ ನಾವಡರು ರವಿ ಅಲೆವೂರಾಯರು ಪಾವೂರು ನಾರಾಯಣ ಶೆಟ್ಟಿ ಕಂಬಳ ನಾರಾಯಣ ಶೆಟ್ಟಿ ದಿವಂಗತ ರಮೇಶ್ ಭಂಡಾರಿ ಕಪಣಮೊಗರು,ಪದ್ಮನಾಭ ಭಂಡಾರಿ ಕಪಣಮೊಗರು ಆಲಬೆ ರಾಮ ಚಂದ್ರಯ್ಯ ಆಚಾರಿ,ಪೂವಣ್ಣ ಶಟ್ಟಿ, ಹೀಗೆ ಹಲವರು ಕಲಾವಿದರಾಗಿ ರೂಪುಗೊಂಡರು ಯಕ್ಷಗಾನ ಸಂಘಕ್ಕೆ ಹಿಮ್ಮೇಳದಲ್ಲಿ ರಾಮಕೃಷ್ಣ ನಾವಡರು,ಸೇಸಪ್ಪ ದೇವಾಡಿಗರು ಸೀತಾರಾಮ ಮಯ್ಯರು ಸಹರಿಸುತ್ತಿದ್ದರೆ ಸುಬ್ರಾಯ ನಾವಡರು ಕಲಾವಿದರನ್ನು ಹುರಿದಂಬಿಸುತ್ತಿದ್ದರು. 1974ರಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದ ದೇವೀ ಮಹಾತ್ಮೆ ದಾಖಲೆಯನ್ನೇ ಬರೆದಿತ್ತು. ರಸ್ತೆ ಸಂಪರ್ಕವಿಲ್ಲದ ಕಾಲದಲ್ಲಿ 700 ಜನ ಸೇರಿದ್ದರಂತೆ ಅಂದು ಮಹಿಷಾಸುರ ಪಾತ್ರ ನಿರ್ವಹಿಸಿದವರು ಖ್ಯಾತ ಭಾಗವತರಾದ ಕುರಿಯ ಗಣಪಣ್ಣ ಅಂದು ಬಂದವರಿಗೆ ನಮ್ಮ ಮನೆಯಲ್ಲಿ ಉಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 600 ಜನ ಊಟ ಮಾಡಿದ್ದರಂತೆ.
ಶ್ರೀ ಕ್ಷೇತ್ರದ ಯಕ್ಷಗಾನ ಸಂಘ ಹಲವಾರು ಕಡೆ ಪ್ರದರ್ಶನವನ್ನು ನೀಡಿದೆ. ಹಾಸನದ ಹುಲಿಕಲ್ ನಲ್ಲಿಯೂ ಪ್ರದರ್ಶನ ನೀಡಿತ್ತು, ಅನೇಕ ಖ್ಯಾತನಾಮ ಕಲಾವಿದರು ಇಲ್ಲಿ ಪ್ರದರ್ಶನ ನೀಡಿದ್ದಾರೆ.ನಮ್ಮ ಯಕ್ಷಗಾನ ಸಂಘದ ಪ್ರತಿಭೆಗಳಾದ ತಾರನಾಥ ಬಲ್ಯಾಯ ಮತ್ತು ರವಿ ಅಲೆವೂರಾಯರು ಇಂದು ಯಕ್ಷರಂಗದಲ್ಲೇ ತಮ್ಮ ಛಾಪು ಮೂಡಿಸಿ ಖ್ಯಾತಿ ಪಡೆದಿದ್ದಾರೆ. ನರ್ಸಪ್ಪಯ್ಯ ನಾವಡರು ಶ್ರೀ ಕ್ಷೇತ್ರದಲ್ಲಿ ಮಕ್ಕಳ ಮೇಳವನ್ನು ಆರಂಭಿಸಿ ಮುನ್ನಡೆಸುತ್ತಿದ್ದಾರೆ.ಗಣೇಶ್ ಮಯ್ಯರು ಕಟೀಲು ಬಪ್ಪನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ಸದ್ಯ ಮುಂಬಯಿಯಲ್ಲಿ ಕಲಾ ಸೇವೆ ಮುಂದುವರಿಸಿದ್ದಾರೆ. ತುಕಾರಾಮ ದೇವಾಡಿಗ ಧರ್ಮಸ್ಥಳ ಮೇಳದಲ್ಲಿ ತಿರುಗಾಟವನ್ನು ನಡೆಸಿದ್ದಾರೆ
ಪ್ರಮುಖ ಸಂಗತಿಗಳು
1941 ಲಿಂಗಪ್ಪ ಭಂಡಾರಿ ಅಧಿಕಾರ
1957 ವಿಶ್ವನಾಥ ಅಡಪ್ಪ ಅಧಿಕಾರ
1972-73 ಸೇವಾ ಸಮಿತಿ ಸ್ಥಾಪನೆ
1976 ಯಕ್ಷಗಾನ ಸಂಘ ಸ್ಥಾಪನೆ
1983 ದುರ್ಗಾದಾಸ್ ಭಂಡಾರಿ ಅಧಿಕಾರ ಸ್ವೀಕಾರ
1986 ಅಷ್ಟಬಂಧ ಬ್ರಹ್ಮಕಲಶ
2008 ಬ್ರಹ್ಮಕಲಶೋತ್ಸವ
2013 ನಾಗ ತನುಮಂಡಲ
1993ರಿಂದ ನಮ್ಮ ಮಂಡಳಿ ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಶ್ರೀ ಕ್ಷೇತ್ರದ ಗಣದಲ್ಲಿ ಹುಟ್ಟಿ ಆಡಿ ಕೂಡಾಡಿ ಬೆಳೆದವರು ನಾವು ಶ್ರೀ ಸುಬ್ರಹ್ಮಣ್ಯ ದೇವರ ಸಂಪೂರ್ಣ ಅನುಗ್ರಹ ನಮ್ಮ ಮೇಲಿರುವುದರಿಂದಲೇ ಇದುವರೆಗೆ ಎಲ್ಲಾ ಕಾರ್ಯಗಳು ಅತ್ಯಂತ ಯಶ್ಸ್ವಿಯಾಗಿದೆ ಎಂಬ ಕೃತಜ್ನತಾಭಾವ ನಮ್ಮದು.
ಕೊನೆಯ ಮಾತು.
ಇಷ್ಟೆಲ್ಲಾ ದಾಖಲೆಗಳನ್ನು ತಮ್ಮ ಮುಂದಿಡುವುದಕ್ಕೆ ನಮ್ಮೂರಿನ ಅನೇಕ ಹಿರಿಯರ ಸಲಹೆಯನ್ನು ಪಡೆದಿದ್ದೇನೆ. ಬಹುಶ ಕೆಲೆವೆಡೆ ತಪ್ಪುಗಳಿರಬಹುದು. ಆದರೆ ಇದುವರೆಗೂ ಮೌಖಿಕವಾಗಿದ್ದ ಹಲವು ವಿಚಾರಗಳನ್ನು ಅಕ್ಷರ ರೂಪದಲ್ಲಿ ಇಳಿಸಿ ದಾಖಲೆಯಾಗುವಂತೆ ಪ್ರಯತ್ನಿಸಿದ್ದೇನೆ ಈ ಲೇಖನದ ಬಗ್ಗೆ ಯಾವುದೇ ಸಲಹೆ ಸೂಚನೆಗಳನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ. ಈ ಲೇಖನ ಸಿದ್ಧ ಪಡಿಸುವಲ್ಲಿ ಸಹಕರಿಸಿದ ಎಲ್ಲರಿಗೂ ನಾನು ಚಿರಱಣಿ. ನಮ್ಮ ಸಂಘದ ಸದಸ್ಯರಲ್ಲಿರುವ ಬೇರೆ ಬೇರೆ ರೀತಿಯ ಸಾಧನೆ ಪ್ರತಿಭೆಗಳಿಗೆ ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹವೇ ಕಾರಣ. ಈ ಪುಣ್ಯ ಮಣ್ಣಿನಲ್ಲಿ ಬೆಳೆದ ಕಾರಣ ನಮ್ಮಲ್ಲಿ ಒಂದಷ್ಟು ಪ್ರತಿಭೆಯ ಸಿಂಚನವಾಗಿದೆ. ಸಾಧನೆಯ ಕಿರಣ ಹೊರಸೂಸಿದೆ ಇದುವರೆಗೆ ಯಾವುದೇ ರೀತಿಯ ವಿಚಾರಗಳು ಶ್ರೀ ಕ್ಷೇತ್ರದಲ್ಲಿ ದಾಖಲಾಗದೆ ಇರುವುದರಿಂದ ಮುಂದಿನ ದಿನಗಳಲ್ಲಿ ಆಸಕ್ತರಿಗೆ ಒಂದಷ್ಟು ಮಾಹಿತಿಯ ಪೂರಣವಾಗಬೇಕು ಎಂಬ ನಿಟ್ಟಿನಲ್ಲಿ ಈ ಲೇಖನವನ್ನು ಸಿದ್ಧಪಡಿಸಿದ್ದೇನೆ.
ನಾಗರಾಜ್ ವರ್ಕಾಡಿ